ನಾಗವ
ಸು. 1700. ಜೈನಕವಿ. ಭಾಮಿನಿ ಷಟ್ಪದಿಯ 298 ಪದ್ಯಗಳಿರುವ ಮಾಣಿಕಸ್ವಾಮಿ ಚರಿತೆಯ ಕರ್ತೃ. ತಂದೆ ಕೋಟಿಲಾಭಾನ್ವಯದ ಸ್ಥಿರಗುಣಿ ಸೊಡ್ಡೆ ಸೆಟ್ಟಿ. ತಾಯಿ ಚೌಡಾಂಬಿಕೆ. ಜೈನ ಮಾದರಿಯ ರಾಮಾಯಣಗಳಲ್ಲೊಂದಾದ ಈತನ ಕೃತಿಯ ವಸ್ತು ಹೀಗಿದೆ: ದೇವೇಂದ್ರ ಮಂಡೋದರಿಗೆ ನೀಡಿದ ಮಾಣಿಕ ಜಿನಬಿಂಬವನ್ನು ಆಕೆ ನಿತ್ಯವೂ ಪೂಜಿಸುತ್ತಿದ್ದು ರಾವಣವಧಾನಂತರ ಶತ್ರುಗಳ ಭಯದಿಂದ ಅದನ್ನು ಸಮುದ್ರದಲ್ಲಿ ಹಾಕಿದಳು. ಬಹುಕಾಲದ ಮೇಲೆ ಈ ವಿಷಯವನ್ನು ಶಂಕರಗಂಡನೆಂಬ ಮಹಾರಾಜ ಒಬ್ಬ ಬೇಡನಿಂದ ತಿಳಿದು ಅದನ್ನು ಒಬ್ಬ ಪತಿವ್ರತಾಸ್ತ್ರೀಯ ಸಹಾಯದಿಂದ ತರಿಸಿ, ಕೊಲ್ಲಿಪಾಕ್ಷ ಎಂಬ ಪಟ್ಟಣದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ಕಟ್ಟಿಸಿದ. ಹನುಮನ ಶೌರ್ಯ, ಯುದ್ಧದಲ್ಲಿ ಅವನು ಶತ್ರುಗಳನ್ನು ಧ್ವಂಸ ಮಾಡಿದ ಬಗೆ, ಚಂದ್ರೋದಯದ ವರ್ಣನೆ ಮುಂತಾದುವು ಈತನ ಕಾವ್ಯದಲ್ಲಿ ಸುಂದರವಾಗಿ ಬಂದಿವೆ.						
	(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ